ಕಾರ್ತಿಕ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಚೈತ್ರ ಶುಕ್ಲ ಪ್ರಥಮಾತಿಥಿಯ ದಿವಸದಿಂದ ಪ್ರಾರಂಭಿಸಿ ಗಣನೆ ಮಾಡುವ ಹನ್ನೆರಡು ಚಾಂದ್ರಮಾನ ಮಾಸಗಳಲ್ಲಿ ಇದು ಎಂಟನೆಯದು. ಈ ತಿಂಗಳಿನ ಮೊದಲಿನಲ್ಲಿ ಸೂರ್ಯ ತುಲಾರಾಶಿಯಲ್ಲಿದ್ದು ಕೊನೆಯ ವೇಳೆಗೆ ವೃಶ್ಚಿಕರಾಶಿಯಲ್ಲಿರುತ್ತಾನೆ. ಅನೇಕ ವರ್ಷಗಳಿಗೊಮ್ಮೆ ಮೊದಲಿನ ಒಂದೆರಡು ದಿನಗಳ ವರೆಗೆ ತುಲಾರಾಶಿಯಲ್ಲೂ ಕೊನೆಯ ಒಂದೆರಡು ದಿನಗಳ ಕಾಲ ವೃಶ್ಚಿಕರಾಶಿಯಲ್ಲೂ ಸೂರ್ಯ ಇರುವ ಸಂಭವವುಂಟು ಹೀಗೆ ಕಾರ್ತಿಕಮಾಸದಲ್ಲಿ ಸೂರ್ಯ ಮೂರು ರಾಶಿಗಳಲ್ಲೂ ಸಂಚರಿಸಿದಾಗ ಈ ತಿಂಗಳನ್ನು ಕ್ಷಯಮಾಸವೆಂದು ಕರೆಯುತ್ತಾರೆ. ಈ ಕ್ಷಯಮಾಸ ಒಂಬತ್ತು ಅಥವಾ ನೂರ ನಲವತ್ತೊಂದು ವರ್ಷಗಳಿಗೊಮ್ಮೆ ಅಥವಾ ಈ ಎರಡು ಸಂಖ್ಯೆಗಳ ಆವೃತ್ತಿ ಸಂಖ್ಯೆಯ ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಕಾರ್ತಿಕ್ಯಾದಿಷ್ಟುಸಂಯೋಗೇ ಕೃತ್ತಿಕಾದಿ ದ್ವಯಂ ದ್ವಯಂ |

ಅಂತ್ಯೋಪಾಂತ್ಯೌ ಪಂಚಮಶ್ಚ ತ್ರಿಧಾ ಮಾಸತ್ರಯಂ ಸ್ಮøತಂ ||

ಎಂದು ಸೂರ್ಯಸಿದ್ಧಾಂತದಲ್ಲಿ ತಿಳಿಸಿರುವಂತೆ ಚಾಂದ್ರಮಾನ ಮಾಸದ ಹುಣ್ಣಿಮೆಯ ದಿನ ಕೃತ್ತಿಕೆ ಅಥವಾ ರೋಹಿಣಿ ನಕ್ಷತ್ರವಿದ್ದರೆ ಆ ತಿಂಗಳು ಕಾರ್ತಿಕಮಾಸವಾಗುತ್ತದೆ. ಶರಧೃತುವಿನಲ್ಲಿ ಇದು ಎರಡನೆಯ ತಿಂಗಳು. ಇದಕ್ಕೆ ಬಾಹುಲ, ಊರ್ಜ, ಕೌಮುದ ಎಂಬ ಪರ್ಯಾಯನಾಮಗಳೂ ಉಂಟು.

 ಮೇಷಮಾಸ ಮೊದಲುಮಾಡಿ ಗಣನೆ ಮಾಡುವ ಸೌರಮಾನದಲ್ಲೂ ಎಂಟನೆಯದಾದ ವೃಶ್ಚಿಕಮಾಸವನ್ನು ಕಾರ್ತಿಕಮಾಸವೆಂದು ಕರೆಯುತ್ತಾರೆ. ತಮಿಳಿನಲ್ಲಿ ಇದಕ್ಕೆ ಕಾರ್ತಿಹೈ ಎಂದು ಹೆಸರು.

 ವಿಷ್ಣು ಮತ್ತು ಶಿವಾಲಯಗಳಲ್ಲಿ ದೀಪೋತ್ಸವ ನಡೆಸುವುದು ಕಾರ್ತಿಕಮಾಸದ ಒಂದು ವೈಶಿಷ್ಟ್ಯ.

ತ್ರಿಣೇತ್ರಂ ಚಾರುಜಟಿಲಂ ಚಾರುಚಂದ್ರಾರ್ಧಶೇಖರಂ |

ಕೈಲಾಸ ಶಿಖರಾರೂಢಮೂರ್ಜಮಾಸಮುಪಾಸ್ಮಹೆ ||

ಎಂದು ಶ್ರೀತತ್ತ್ವನಿಧಿಯಲ್ಲಿ ತಿಳಿಸಿರುವಂತೆ ಕೈಲಾಸಶಿಖರಾರೂಢನಾದ ಈಶ್ವರನ ಸ್ವರೂಪವೇ ಕಾರ್ತಿಕ ಮಾಸದ ಸ್ವರೂಪವಾಗಿದೆ.

 ಈ ತಿಂಗಳಿನಲ್ಲಿ ಹುಟ್ಟಿದವ ಸತ್ಕಾರ್ಯಗಳನ್ನು ಮಾಡುವವನೂ ವಾಗ್ವಿಲಾಸಿಯೂ ಧನಿಕನೂ ಸತ್ಕಾವ್ಯಗಳನ್ನು ರಚಿಸುವವನೂ ವ್ಯಾಪಾರಶೀಲನೂ ಆಗುತ್ತಾನೆ.

 ಈ ಮಾಸದಲ್ಲಿ ಕೊಡುವ ಸುವರ್ಣ ಮೊದಲಾದ ದಾನಗಳು ಅನಂತ ಪುಣ್ಯಫಲಗಳನ್ನು ಕೊಡುತ್ತವೆ. ಈ ತಿಂಗಳಿನಲ್ಲಿ ಸಂಭವಿಸುವ ಗ್ರಹಣಕಾಲದಲ್ಲಿ ಗಂಗಾ ಯಮುನಾನದಿಗಳ ಸಂಗಮದಲ್ಲಿ ಸ್ನಾನ ಅತ್ಯಂತ ಶ್ರೇಷ್ಠ. ತಲಕಾಡು ಸ್ಥಳಪುರಾಣದಲ್ಲಿ ತಿಳಿಸಿರುವಂತೆ ಕಾರ್ತಿಕಮಾಸದ ಅಮಾವಾಸ್ಯೆಯ ದಿನ ಸೋಮವಾರವಾಗಿ ಸೂರ್ಯ ವೃಶ್ಚಿಕರಾಶಿಯಲ್ಲಿದ್ದರೆ ಆ ದಿವಸ ತಲಕಾಡಿನಲ್ಲಿ ಪಂಚಲಿಂಗದರ್ಶನ ಜಾತ್ರೆ ನಡೆಯುತ್ತದೆ. ಕಾರ್ತಿಕಮಾಸ ಪೂರ್ತಿ ಪ್ರತಿನಿತ್ಯವೂ ಮಹಾನದಿಯಲ್ಲಿ ಪ್ರಾತಃಕಾಲ ಸ್ನಾನ ಮಾಡುವುದರಿಂದ ಮಹಾಪಾತಕಗಳು ನಾಶವಾಗುತ್ತವೆ. ವನದಲ್ಲಿ ಧಾತ್ರೀ (ನೆಲ್ಲಿಯ) ಮರದ ಸಮೀಪದಲ್ಲಿ ವಿಷ್ಣುವನ್ನು ಪೂಜಿಸಿ ಹೋಮ, ಭೋಜನ ಮೊದಲಾದುವನ್ನು ಮಾಡುವುದು (ಧಾತ್ರೀಹವನ) ಈ ತಿಂಗಳಿನಲ್ಲೇ. ಮಾಂಸಭಕ್ಷಣ ಮತ್ತು ಪರಾನ್ನಭೋಜನ ಈ ಮಾಸದಲ್ಲಿ ನಿಷಿದ್ಧವಾಗಿದೆ.

 ಈ ಮಾಸದ ಶುಕ್ಲ ಪಕ್ಷ ಪ್ರಥಮಾ ತಿಥಿಯ ದಿವಸದಲ್ಲಿ ಅಭ್ಯಂಗಸ್ನಾನ, ಹೊಸ ಬಟ್ಟೆಯನ್ನುಡುವುದು, ಬಲೀಂದ್ರಪೂಜೆ, ದೀಪೋತ್ಸವ, ಗೋಕ್ರೀಡನ, ಗೋವರ್ಧನ ಪೂಜೆ, ಮಾರ್ಗಪಾಲೀಬಂಧನ, ದ್ಯೂತ-ಇವು ವಿಹಿತವಾಗಿವೆ. ಕೆಲವು ಜನಾಂಗಕ್ಕೆ ಈ ದಿವಸ ವರ್ಷ ಪ್ರಾರಂಭದ ದಿನ. ಅವರು ಹೊಸ ಲೆಕ್ಕವನ್ನು ಇಂದಿನಿಂದ ಪ್ರಾರಂಭಿಸುತ್ತಾರೆ. ಈ ದಿವಸಕ್ಕೆ ದೀಪಾವಳಿ ಎಂದೂ ಹೆಸರು.

 ಶುಕ್ಲ ದ್ವಿತೀಯ ತಿಥಿಯ ದಿವಸಕ್ಕೆ ಯಮದ್ವಿತೀಯಾ ಎಂದು ಹೆಸರು. ಈ ದಿವಸ ತಮ್ಮ ಮನೆಯಲ್ಲಿ ಊಟ ಮಾಡದೆ ಸಹೋದರಿಯರು ಬಡಿಸಿದುದನ್ನು ಊಟ ಮಾಡಬೇಕು. ಇದರಿಂದ ಧನ ಧಾನ್ಯ ಸೌಖ್ಯಗಳು ಉಂಟಾಗುತ್ತವೆ. ಸಹೋದರಿಯರಿಗೆ ಸೌಮಂಗಲ್ಯವೂ ಭ್ರಾತೃಸೌಖ್ಯವೂ ಉಂಟಾಗುತ್ತವೆ. ಈ ದಿವಸದಲ್ಲಿ ಯಮುನಾ ನದೀಸ್ನಾನವೂ ಯಮುನಾ ಪೂಜೆಯೂ ಶಾಸ್ತ್ರದಲ್ಲಿ ವಿಹಿತವಾಗಿದೆ.

 ಕಾರ್ತಿಕ ಶುಕ್ಲ ಏಕಾದಶಿ ದಿವಸ ಪ್ರಾರಂಭಿಸಿ ಐದು ದಿನಗಳ ಕಾಲ ಭೀಷ್ಮಪಂಚಕ ವ್ರತವನ್ನು ಮಾಡುತ್ತಾರೆ. ವಿಷ್ಣುದೀಕ್ಷೆ ಮತ್ತು ಶಿವದೀಕ್ಷೆಗೆ ಈ ದಿವಸ ಶ್ರೇಷ್ಠವಾದುದು. ಈ ಏಕಾದಶಿಗೆ ಉತ್ಥಾನೈಕಾದಶೀ ಎಂದೂ ದ್ವಾದಶಿಗೆ ಉತ್ಥಾನ ದ್ವಾದಶೀ ಎಂದೂ ಹೆಸರು. ಆಷಾಢ ಶುಕ್ಲ ಏಕಾದಶಿಯಂದು ಶಯನೋತ್ಸವವಾದ ವಿಷ್ಣುವಿಗೆ ಈ ದಿವಸ ಪ್ರಬೋಧೋತ್ಸವ ನಡೆಯುತ್ತದೆ. ತುಲಸೀವಿವಾಹಕ್ಕೂ ಇದೇ ಕಾಲ. ಶುಕ್ಲ ದ್ವಾದಶೀ ದಿವಸದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯವ್ರತ ಇಂದಿಗೆ ಮುಕ್ತಾಯವಾಗುತ್ತದೆ. ಕಾರ್ತಿಕ ಶುಕ್ಲ ಚತುರ್ದಶಿಗೆ ವೈಕುಂಠ ಚತುರ್ದಶಿ ಎಂದು ಹೆಸರು. ಇದರಲ್ಲಿ ವಿಷ್ಣು ಮತ್ತು ಶಿವಪೂಜೆಗಳು ವಿಹಿತವಾಗಿವೆ. ಈ ತಿಂಗಳ ಕೃಷ್ಣಪಕ್ಷದ ಅಷ್ಟಮಿಗೆ ಕಾಲಾಷ್ಟಮಿ ಎಂದು ಹೆಸರು. ಕಾಲಭೈರವಪೂಜೆ ಅಂದಿನ ವಿಶೇಷ.

 ಕಾರ್ತಿಕ ಶುಕ್ಲ ಪ್ರಥಮಾ ತಿಥಿಯ ದಿವಸ ಬುಧವಾರವಾದರೆ ಮುಂದೆ ಬರುವ ಮಳೆ ಮಧ್ಯಮವಾಗಿರುತ್ತದೆ. ಶುಕ್ಲ ದ್ವಿತೀಯ ತೃತೀಯಾ ದಿವಸಗಳಲ್ಲಿ ಮಳೆಯ ಲಕ್ಷಣ ಕಂಡುಬಂದು ಮಳೆ ಬೀಳದಿದ್ದರೆ ಅದರ ಮುಂದಿನ ವರ್ಷದಲ್ಲಿ ಹೆಚ್ಚಾಗಿ ಮಳೆ ಬೀಳುತ್ತದೆ. ಶುಕ್ಲ ಏಕಾದಶಿ ದಿವಸ ಮೋಡ ಕಂಡು ಬಂದರೆ ಆಷಾಢಮಾಸದಲ್ಲಿ ಖಂಡಿತ ಮಳೆ ಬೀಳುತ್ತದೆ. ಈ ತಿಂಗಳಿನಲ್ಲಿ ಚಂದ್ರ, ಸೂರ್ಯರ ಗ್ರಹಣವಾದರೆ ಭೂಕಂಪ ಉಲ್ಕಾಪಾತಾದಿ ದುರ್ನಿಮಿತ್ತಗಳು ಕಾಣಿಸಿಕೊಳ್ಳುತ್ತವೆ. ಕಾರ್ತಿಕಮಾಸದ ಎಲ್ಲ ಸೋಮವಾರಗಳಲ್ಲೂ ಶಿವದೇವಾಯಲಗಳಲ್ಲಿ ದೀಪೋತ್ಸವವನ್ನು ತಪ್ಪದೆ ವಿಶೇಷವಾಗಿ ಆಚರಿಸುತ್ತಾರೆ.    

(ಎಸ್.ಎನ್.ಕೆ.)